ರೈತರೇ ಕೀಟನಾಶಕಗಳ ವಿಷಜಾಲದಿಂದ ಹೊರಬಂದು ಬಳಸಿ ನೈಸರ್ಗಿಕ ಕೀಟ ಹತೋಟಿ ತಂತ್ರ Natural pest control strategy

AGRICULTURE
26 June 2024

ರೈತರೇ ಕೀಟನಾಶಕಗಳ ವಿಷಜಾಲದಿಂದ ಹೊರಬಂದು ಬಳಸಿ ನೈಸರ್ಗಿಕ ಕೀಟ ಹತೋಟಿ ತಂತ್ರ Natural pest control strategy
WhatsApp Group Join Now
Telegram Group Join Now

Natural pest control strategy : ರಾಸಾಯನಿಕ ಕೀಟನಾಶಕಗಳಿಲ್ಲದೇ ಬೇಸಾಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ತರಾವರಿ ಕೀಟನಾಶಕಗಳ ಆರ್ಭಟ ಮುಗಿಲು ಮುಟ್ಟಿಕೊಂಡಿದೆ. ರಾಸಾಯನಿಕ ಗೊಬ್ಬರ, ಕೀಟನಾಶಕಗಳಿಂದಾಗಿಯೇ ಅನ್ನದಾತ ಸಾಲಗಾರನಾಗುತ್ತಿದ್ದಾನೆ. ರೈತನ ಜೊತೆಗೆ ಇಡೀ ವಾತಾವರಣವನ್ನು ಕಲುಷಿತಗೊಳಿಸಿ, ಪರಿಸರವನ್ನೇ ಆಯ ತಪ್ಪಿಸಿ ಸಮಸ್ತ ಜೀವಜಾಲ ಈ ವಿಷ ವರ್ತುಲದಲ್ಲಿ ವಿಲಗುಟ್ಟುವಂತೆ ಮಾಡುತ್ತಿವೆ. 


ರೈತರ ಜೀವಹಿಂಡುವ ವಿಷಜಾಲ

ಬರೋಬ್ಬರಿ 4.9 ಬಿಲಿಯನ್ ಡಾಲರ್‌ನಷ್ಟು ಭಾರತದ ಕೀಟನಾಶಕ ಮಾರುಕಟ್ಟೆಯ ವಹಿವಾಟಿದೆ. ಈ ದಂಧೆಯಲ್ಲಿ ಅಮೆರಿಕ, ಚೀನಾ, ಜಪಾನ್ ದೇಶಗಳ ನಂತರದ ಸ್ಥಾನ ಭಾರತದ್ದೇ ಆಗಿದೆ. ದುರ್ದೈವದ ಸಂಗತಿ ಎಂದರೆ ಯುರೋಪ್ ಒಕ್ಕೂಟ ಸಹಿತ ಹಲವು ದೇಶಗಳಲ್ಲಿ ನಿಷೇಧಕ್ಕೊಳಗಾಗಿರುವ ಕೀಟನಾಶಕಗಳು ಭಾರತದಲ್ಲಿ ಇನ್ನೂ ಬಳಕೆಯಲ್ಲಿವೆ. 


2017ರಲ್ಲಿ ಪೆಸ್ಟಿಸೈಡ್ ಆಕ್ಷನ್ ನೆಟ್‌ವರ್ಕ್ ಪ್ರಕಟಿಸಿದ ನಿಷೇಧಿತ ಕೀಟನಾಶಕಗಳ ಕ್ರೋಢೀಕೃತ ಪಟ್ಟಿ ಆಧರಿಸಿ ಹೇಳುವುದಾದರೆ ಜಗತ್ತಿನ ನೂರಾರು ದೇಶಗಳು ನಿಷೇಧಿಸಿರುವ ಮೋನೋ ಕ್ರೋಟೋಫಾಸ್, ಟ್ರೆಝಾಫಾಸ್, ಫಾಸ್ಫಾಮಿಡಾನ್, ಕಾರ್ಬೋಫ್ಯುರಾನ್, ಮಿಥೈಲ್ ಪಾರಾಥಿಯಾನ್, ಫೋರೇಟ್‌ನಂತಹ ಕಾರ್ಕೋಟಕ ವಿಷಗಳು ಭಾರತದಲ್ಲಿ ಇನ್ನೂ ಚಲಾವಣೆಯಲ್ಲಿವೆ.


ಇಂತಹ ಸಹಸ್ರಾರು ವಿಷಗಳು ದೇಶದ ಆರೋಗ್ಯವನ್ನು ಹಳ್ಳ ಹಿಡಿಸಿ ರೈತನ ಬದುಕನ್ನೂ ಮೂರಾಬಟ್ಟೆ ಮಾಡುತ್ತಿವೆ. ಹಾಗೇ ನೋಡಿದರೆ ಎಷ್ಟೋ ಕೀಟಗಳು, ಜೀವಿಗಳು ರೈತಸ್ನೇಹಿಯಾಗಿರುತ್ತವೆ. ಇಂತಹ ಜೀವಜಾಲವನ್ನು ರಕ್ಷಿಸಿ, ಬೆಳೆಯನ್ನೂ ಉಳಿಸಿಕೊಳ್ಳಬೇಕೆಂದರೆ ಸಹಜ ವಿಧಾನಗಳ ಬಳಕೆ ಇಂದು ತೀರಾ ಅನಿವಾರ್ಯವಾಗಿದೆ.


ಕೀಟ ನಿಯಂತ್ರಕ ಬೆಳೆ ಪದ್ಧತಿ

ಈ ಪೈಕಿ ಮಿಶ್ರ ಪದ್ಧತಿಯ ಬೇಸಾಯ ಬಹಳಷ್ಟು ಬಾರಿ ರೋಗ ನಿಯಂತ್ರಣಕ್ಕೆ ಸಹಕಾರಿ ಆಗುವುದುಂಟು. ಅಲಸಂದೆ, ಉದ್ದು, ಹೆಸರು, ಚೆಂಡು ಹೂ ಮುಂತಾದವುಗಳನ್ನು ತರಕಾರಿ ಮತ್ತು ದ್ವಿದಳ ಧಾನ್ಯಗಳ ನಡುನಡುವೆ ಬೆಳೆಸುವುದರಿಂದ ಅವುಗಳು ಸುಲಭವಾಗಿ ಬೆಳೆ ರಕ್ಷಕಗಳಾಗಿ ಕಾರ್ಯ ನಿರ್ವಹಿಸಬಲ್ಲವು. ಪ್ರಮುಖವಾಗಿ ತರಕಾರಿ ಬೆಳೆಗಳ ಮಧ್ಯೆ ಇವುಗಳನ್ನು ಬೆಳೆಯುವುದರಿಂದ ರೋಗ ನಿಯಂತ್ರಣ ಕಷ್ಟವೇನಲ್ಲ. ಜಮೀನಿನ ಬದುಗಳ ಮೇಲೆ ಔಡಲ ಗಿಡ ಬೆಳೆಸಿದರೆ ಅದು ಹಾನಿಕಾರಕ ಶಿಲೀಂಧ್ರಗಳನ್ನು ನಾಶ ಮಾಡುತ್ತದೆ.


ಅಲಸಂದೆ ಪರಾವಲಂಬಿ ಕೀಟಗಳನ್ನು ಆಕರ್ಷಿಸುತ್ತದೆ. ಚೆಂಡು ಹೂವಿನ ಬೇರುಗಳು ಜಂತು ಹುಳುಗಳನ್ನು ತಡೆಯುವ ಶಕ್ತಿ ಹೊಂದಿವೆ. ನೈಸರ್ಗಿಕ ಕೃಷಿಯಲ್ಲಿ ಉಪಯೋಗಿಸುವ ಪಂಚಗವ್ಯ, ಜೀವಾಮೃತ ಮುಂತಾದವು ಕೇವಲ ಹೆಚ್ಚು ಫಸಲು ನೀಡಬಲ್ಲ ಪ್ರಚೋದಕಗಳಷ್ಟೇ ಅಲ್ಲ. ಕೀಟನಾಶಕಗಳಾಗಿಯೂ ಇವು ಕಾರ್ಯ ನಿರ್ವಹಿಸುತ್ತವೆ. ಜೀವಾಮೃತವನ್ನು ಗೇರು ಮರಗಳಿಗೆ ಸಿಂಪರಣೆ ಮಾಡಿದರೆ ಕೊಳೆ ರೋಗವೂ ಬರುವುದಿಲ್ಲ. ಜೊತೆಗೆ ಉತ್ತಮವಾಗಿ ಹೂವೂ ಬಿಡುತ್ತದೆ ಎಂಬುದು ಹಲವು ರೈತರ ಅನುಭವ.


ನೈಸರ್ಗಿಕ ಕೀಟನಾಶಕ ತಯಾರಿಸಿ

ಜೀವಾಮೃತದ ತೊಟ್ಟಿಗೆ ಬೇವು, ಹೊಂಗೆ, ಲಕ್ಕಿ, ಎಕ್ಕೆ, ಪೇರಲೆ, ಸೀತಾಫಲ, ಗ್ಲಿರಿಸೀಡಿಯಾ, ಔಡಲ, ಪಾರ್ಥೇನಿಯಂ ಹೀಗೆ ಹಲವು ಸಸ್ಯಗಳ ಎಲೆ ಸೇರಿಸಿ ಕೊಳೆಸಿದರೆ ಅದೇ ಉತ್ತಮ ಕೀಟನಾಶಕವಾಗುತ್ತದೆ. ಈ ಎಲ್ಲ ಸಸ್ಯಗಳು ಸಿಗದಿದ್ದರೂ ಇದರಲ್ಲಿ ನಾಲ್ಕೆöÊದು ಜಾತಿಯ ಎಲೆಗಳನ್ನು ಕಡ್ಡಾಯವಾಗಿ ಬೆರೆಸಿದಲ್ಲಿ ಬೆಳೆಗಳಿಗೆ ಉತ್ತಮ ಸಾರಜನಕಯುಕ್ತ ಉತ್ತೇಜಕ ದೊರಕುತ್ತದೆ. ಜೊತೆಗೆ ರೋಗವನ್ನು ತಡೆಯಬಲ್ಲ ಕೀಟನಾಶಕವೂ ಸಿದ್ದವಾಗುತ್ತದೆ. 


ಇಂತಹ ನಿಸರ್ಗದತ್ತವಾದ, ಕಡಿಮೆ ಖರ್ಚಿನ ಕೀಟನಾಶಕ ತಯಾರಿಕಾ ತಂತ್ರಗಳನ್ನು ರೈತರಿಗೆ ತಿಳಿಸಿಕೊಡುವ ಕಾರ್ಯ ಸಮರೋಪಾದಿಯಲ್ಲಿ ನಡೆಯಬೇಕಿದೆ. ಆ ಮೂಲಕ ಸಾವಯವ, ನೈಸರ್ಗಿಕ ಬೇಸಾಯ ಪದ್ಧತಿಯನ್ನು ಪ್ರೇರೇಪಿಸಬೇಕಿದೆ. ಇಲ್ಲವೆಂದರೆ ಹೊಲ, ಗದ್ದೆಗಳಲ್ಲಿ ಗುಪ್ತಗಾಮಿನಿಯಂತೆ ಹರಿಯುತ್ತಿರುವ ವಿಷದ ಹೊಳೆ, ಕೇವಲ ರೈತನನ್ನು ಮಾತ್ರವಲ್ಲ ಎಲ್ಲರನ್ನೂ ಆಪೋಶನ ಪಡೆಯಲಿದೆ!

Most Popular

Related Posts