ಸರಕಾರಿ ಯೋಜನೆಗಳ ಮಾಹಿತಿಯನ್ನು ರೈತರ ಮನೆ ಬಾಗಿಲಿಗೇ ತರುವ ಕೃಷಿಸಖಿ ಮತ್ತು ಪಶುಸಖಿಯರು Krishi Sakhi and Pashu Sakhi in Karnataka

AGRICULTURE
25 June 2024

ಸರಕಾರಿ ಯೋಜನೆಗಳ ಮಾಹಿತಿಯನ್ನು ರೈತರ ಮನೆ ಬಾಗಿಲಿಗೇ ತರುವ ಕೃಷಿಸಖಿ ಮತ್ತು ಪಶುಸಖಿಯರು  Krishi Sakhi and Pashu Sakhi in Karnataka
WhatsApp Group Join Now
Telegram Group Join Now

ಯಾರೀ ಕೃಷಿ ಸಖಿ, ಪಶು ಸಖಿ? ಏನು ಇವರ ಕಾರ್ಯವೈಖರಿ? ಇದರಿಂದ ರೈತರಿಗೆ, ಹೈನುಗಾರರಿಗೆ ಆಗುವ ಪ್ರಯೋಜನವೇನು? ನೀವೂ ಕೃಷಿ ಮತ್ತು ಪಶು ಸಖಿಯರಾಗಬೇಕೇ? ಅದಕ್ಕಾಗಿ ಏನು ಮಾಡಬೇಕು? ಇತ್ಯಾದಿ ಮಾಹಿತಿ ಇಲ್ಲಿದೆ...


ಹಳ್ಳಿಗಳಲ್ಲಿ ಮನೆಮನೆಗೂ ತೆರಳಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನಾ ಇಲಾಖೆ ಸೇರಿದಂತೆ ಕೃಷಿ ಮತ್ತು ಪಶು ವಲಯಕ್ಕೆ ಸಂಬ೦ಧಿಸಿದ ಎಲ್ಲ ಇಲಾಖೆಗಳು, ಆಯಾ ಇಲಾಖೆ ಮೂಲಕ ಜಾರಿಗೊಳಿಸಲಾಗುವ ಯೋಜನೆಗಳು, ಅವುಗಳನ್ನು ಸದುಪಯೋಗ ಮಾಡಿಕೊಳ್ಳುವ ಸಲಹೆಗಳನ್ನು ಈ ‘ಸಖಿ’ಯರು ನೀಡುತ್ತಾರೆ.


ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಐವರು ಸಖಿಯರಿದ್ದು; ಇವರು ಸಮುದಾಯ ಸಂಪನ್ಮೂಲ ವ್ಯಕ್ತಿಗಳ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ತರಬೇತಿ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದಲ್ಲದೇ, ಸರಕಾರಿ ಯೋಜನೆಗಳ ಮಾಹಿತಿ ಕೊರತೆಯಿಂದ ಪರದಾಡುವ ಕೃಷಿ ಮತ್ತು ಪಶುಪಾಲನಾ ವಲಯದ ಲಕ್ಷಾಂತರ ರೈತರಿಗೆ ಮಾರ್ಗದರ್ಶನ ನೀಡಿ, ಯೋಜನೆಯ ಸದ್ಭಳಕೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ಸರಕಾರ ‘ಸಖಿ’ಯರನ್ನು ನೇಮಿಸಿದೆ.


‘ಸಖಿ’ಯರಾಗಲು ಅರ್ಹತೆಗಳೇನು?

ಕನಿಷ್ಠ ಎರಡು ವರ್ಷಗಳ ಕಾಲ ಸ್ವಸಹಾಯ ಗುಂಪಿನ ಸಕ್ರೀಯ ಸದಸ್ಯರಾಗಿರಬೇಕು, ಕನಿಷ್ಠ 10ನೇ ತರಗತಿ ತೇರ್ಗಡೆ ಹೊಂದಿರಬೇಕು. ಕನಿಷ್ಠ ಒಂದು ಎಕರೆ ಸ್ವಂತ ಅಥವಾ ಗುತ್ತಿಗೆ ಆಧಾರದಲ್ಲಿ ಕೃಷಿ ಯೋಗ್ಯ ಜಮೀನು ಹೊಂದಿರಬೇಕು. ಕನಿಷ್ಠ 20 ಗುಂಟೆ ಜಮೀನಿನಲ್ಲಿ ಸಾವಯುವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಿದ್ಧರಿರಬೇಕು.


ಕೃಷಿ, ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆ ಸಾಕಾಣಿಕೆ, ಮೀನು ಸಾಕಾಣಿಕೆ ಹಾಗೂ ಕೃಷಿ ಸಂಬ೦ಧಿತ ಯಾವುದಾದರೂ ಚಟುವಟಿಕೆಗಳಲ್ಲಿ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡಿರುವ, ಅಳವಡಿಸಿಕೊಳ್ಳಲು ಸಿದ್ಧರಿರುವ ಅಥವಾ ಆಳವಡಿಸಿಕೊಂಡು ಅನುಸರಿಸುತ್ತಿರುವ ರೈತ ಮಹಿಳೆಯಾಗಿರಬೇಕು ಅಥವಾ ಅಂತಹ ಕುಟುಂಬದ ಮಹಿಳೆಯಾಗಿರಬೇಕು.


ಕೃಷಿ ಜೀವನೋಪಾಯ ಕಾರ್ಯಕ್ರಮಗಳಿಗೆ ಸಂಬ೦ಧಿಸಿದ ತರಬೇತಿಗಳಿಗೆ ಹಾಜರಾಗಲು ಸಿದ್ಧರಿರಬೇಕು ಮತ್ತು ಅನುಷ್ಠಾನ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳಬೇಕು. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ (NRLM-National Rural Livelihood Mission) ಯಾವುದೇ ಇತರೇ ವಿಷಯಾಧಾರಿತ ವಿಭಾಗದಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿ ಆಗಿರಬಾರದು.


ಕೃಷಿ ಸಖಿಯರು

ಕೃಷಿ, ರೇಷ್ಮೆ, ತೋಟಗಾರಿಕೆ ಇಲಾಖೆಗೆ ಸಂಬ೦ಧಿಸಿದ೦ತೆ ರೈತರಿಗೆ ಮಾಹಿತಿ ನೀಡುವುದು ಇವರ ಕಾರ್ಯ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಇಲಾಖೆಗಳು ಇಲ್ಲ. ಹಳ್ಳಿಗಳಿಗೆ ಅಧಿಕಾರಿಗಳು ಹೋಗುವುದಿಲ್ಲ. ಪಟ್ಟಣಕ್ಕೆ ಅಲೆಯುವ ತ್ರಾಣ ಮತ್ತು ಸಮಯ ರೈತರಿಗಿಲ್ಲ. ಹೀಗಾಗಿ ಕೃಷಿ ಇಲಾಖೆಯ ಹಲವು ಯೋಜನೆಗಳು ಸದ್ಭಳಕೆಯಾಗುತ್ತಿಲ್ಲ. ಯೋಜನೆಯ ಲಾಭ ಪಡೆಯಲು ಪುನಃ ಪುನಃ ಗಡುವು ನೀಡುವುದು, ಯೋಜನೆಯ ಬಗ್ಗೆ ಜಾಗೃತಿ ಮೂಡಿಸಲೆಂದೇ ಹಣ, ಸಮಯ ವ್ಯರ್ಥ ಮಾಡುವಂತಹ ಕಾರ್ಯಗಳಾಗುತ್ತಿವೆ.


ಇದನ್ನು ತಪ್ಪಿಸಲು ಕೃಷಿ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳಾಗಿ ‘ಕೃಷಿ ಸಖಿ’ಯರನ್ನು ನೇಮಕ ಮಾಡಲಿದೆ. ಇವರಿಗೆ ಕೃಷಿ ಇಲಾಖೆಯ ವತಿಯಿಂದ 60 ದಿನಗಳ ಕಾಲ ತರಬೇತಿ ನೀಡಲಾಗುತ್ತದೆ. ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಬರ ಪರಿಹಾರ ಸೇರಿದಂತೆ ರೈತರಿಗೆ ಮಾಹಿತಿ ನೀಡುತ್ತಾರೆ.


ಕೃಷಿ ಸಖಿಯ ಕರ್ತವ್ಯಗಳೇನು?

ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಲ್ಲಿ (GPLF) ಮಹಿಳಾ ರೈತರ ವಿವರಗಳನ್ನು ಸಂಗ್ರಹಿಸುವುದು. ಕೃಷಿ ಜೀವನೋಪಾಯ ಉಪಸಮಿತಿಯ ಸದಸ್ಯರಿಗೆ ತರಬೇತಿ ನೀಡುವುದು. 


ಎಲ್ಲಾ ಕೃಷಿ ಜೀವನೋಪಾಯ ಚಟುವಟಿಕೆಗಳನ್ನು ನಕ್ಷೆ ಮಾಡುವುದು. ರೈತರ ಕ್ಷೇತ್ರ ಪಾಠ ಶಾಲೆಯನ್ನು ಆಯೋಜಿಸುವುದು. ತಾಲೂಕು ಮಟ್ಟದ ಕೃಷಿ ತಾಂತ್ರಿಕ ಸಂಯೋಜಕರಿಗೆ ಅಗತ್ಯ ಸಮನ್ವಯವನ್ನು ಒದಗಿಸುವುದು.

 

ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ ಕೃಷಿ, ಮೀನುಗಾರಿಕೆ, ಅರಣ್ಯ ಇಲಾಖೆಗಳು ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಳಿಂದ ಆಸ್ತಿ ರಚನೆ ಸೌಲಭ್ಯಗಳಂತಹ ಎಲ್ಲಾ ಪ್ರಯೋಜನಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದು.


ಕೃಷಿ ವಿಜ್ಞಾನ ಕೇಂದ್ರ, ನಬಾರ್ಡ್ ಮತ್ತು ಇತರ ಕೃಷಿ ಜೀವನೋಪಾಯಗಳ ಅಂಗಸ೦ಸ್ಥೆಗಳು ನಡೆಸುವ ವಿವಿಧ ತರಬೇತಿ ಕಾರ್ಯಕ್ರಮಗಳಿಗೆ ಹಾಜರಾಗಲು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಕಳುಹಿಸುವುದು.


ಸಾವಯವ ಗ್ರಾಮ ಕ್ಲಸ್ಟರ್ ಕಾರ್ಯಕ್ರಮ ಮತ್ತು ಸಮಗ್ರ ಕೃಷಿ ಕ್ಲಸ್ಟರ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಬ್ಲಾಕ್  ತಾಂತ್ರಿಕ ಸಂಯೋಜಕರು ಮತ್ತು ಕ್ಲಸ್ಟರ್ ತಾಂತ್ರಿಕ ಸಂಯೋಜಕರಯೊ೦ದಿಗೆ ಸಮನ್ವಯಗೊಳಿಸುವುದು.


ಫಲಾನುಭವಿಗಳ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಮಣ್ಣು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲು ಮತ್ತು ಫಲಾನುಭವಿಗಳಿಗೆ ಮಣ್ಣು ಪರೀಕ್ಷಾ ಫಲಿತಾಂಶಗಳನ್ನು ವಿತರಿಸಲು ಕೃಷಿ ಇಲಾಖೆ ಅಧಿಕಾರಿಗಳು/ಸಿಬ್ಬಂದಿಗಳೊ೦ದಿಗೆ ನಿಯಮಿತವಾಗಿ ಸಂಪರ್ಕ ಹೊಂದಿರಬೇಕು.


ಕಿಸಾನ್ ಕ್ರೆಡಿಟ್ ಕಾರ್ಡ್, ಬೆಳೆ ವಿಮೆ ಮಾಡಿಸುವುದು, ಬೆಳೆ ನಷ್ಟ ಪರಿಹಾರ, ಬರ ಪರಿಹಾರ ಸೇರಿದಂತೆ ವಿವಿಧ ಸರಕಾರಿ ಯೋಜನೆಗಳ  ಕುರಿತು ಫಲಾನುಭವಿ ರೈತರಿಗೆ ಮಾಹಿತಿಯನ್ನು ಒದಗಿಸಿಸುವುದು.


ರೈತ ಸಂಪರ್ಕ ಕೇಂದ್ರ ಮತ್ತು ಕೃಷಿ ಯಂತ್ರೋಪಕರಣ ಕೇಂದ್ರಗಳ, ಅಧಿಕಾರಿಗಳು/ಸಿಬ್ಬಂದಿಗಳೊ೦ದಿಗೆ ಸಂಪರ್ಕವಿರಿಸಿ ಫಲಾನುಭವಿಗಳಿಗೆ ಈ ಕೇಂದ್ರಗಳಲ್ಲಿ ಲಭ್ಯವಿರುವ ಯೋಜನೆಗಳ ಬಗ್ಗೆ ಅರಿವು ಮೂಡಿಸಿಸುವುದು. ಜಿಲ್ಲಾ ಮತ್ತು ತಾಲೂಕು ಮಟ್ಟದ ಸಿಬ್ಬಂದಿಯ ಸೂಚನೆಗಳನ್ನು ಅನುಸರಿಸುವುದು.

 

ಶು ಸಖಿ

ಪಶುಪಾಲನಾ ಇಲಾಖೆಯ ಯೋಜನೆಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸುವುದು ‘ಪಶು ಸಖಿ’ಯರ ಕಾರ್ಯ. ಜಾನುವಾರು ವಿಮೆ, ಹೈನುಗಾರಿಕೆ ಮಾಹಿತಿ, ಕುರಿ, ಮೇಕೆ, ಹಸು, ಎಮ್ಮೆ, ಕೋಳಿ, ಮೊಲ, ಹಂದಿ ಸಾಕಣೆ ವಿವರ, ಇವುಗಳ ಆರೋಗ್ಯ ಸಂಬ೦ಧಿ ಲಸಿಕೆ, ಕಿವಿಯೋಲೆ ಕಾರ್ಯಕ್ರಮಗಳಂತಹ ಯೋಜನೆಯ ಬಗ್ಗೆ ‘ಪಶು ಸಖಿ’ಯರು ಅರಿವು ಮೂಡಿಸಲಿದ್ದಾರೆ.


ಇವರಿಗೆ ಪಶು ಸಂಗೋಪನಾ ಇಲಾಖೆಯಿಂದ 42 ದಿನಗಳ ಕಾಲ ತರಬೇತಿ ನೀಡಲಾಗುತ್ತದೆ. ಜಾನುವಾರುಗಳ ಬಗ್ಗೆ ಸಮಗ್ರ ಮಾಹಿತಿ, ಹೈನುಗಾರಿಕೆ, ಕೋಳಿ ಸಾಕಣೆ, ಹೀಗೆ ವಿವಿಧ ಮಾಹಿತಿ ನೀಡುವ ಕೆಲಸ ಇವರದ್ದು.


ಪಶು ಸಖಿಯ ಕರ್ತವ್ಯಗಳೇನು?

ಪಶು ಆರೋಗ್ಯ ಶಿಬಿರಗಳನ್ನು ನಡೆಸಲು ಪಶುಪಾಲನಾ ಇಲಾಖೆ ಮತ್ತು ತಾಲೂಕು ಹೋಬಳಿ ಗ್ರಾಮ ಪಂಚಾಯತಿ ಮಟ್ಟದ ಪಶುವೈದ್ಯಕೀಯ ವೈದ್ಯರೊಂದಿಗೆ ಸಮನ್ವಯ ಸಾಧಿಸಿವುದು.


ಡೈರಿ ಚಟುವಟಿಕೆಗಳ ಪ್ರಾಮುಖ್ಯತೆ ಮತ್ತು ಪ್ರಯೋಜನಗಳ ಬಗ್ಗೆ ಫಲಾನುಭವಿಗಳಿಗೆ ಶಿಕ್ಷಣ ನೀಡುವುದು. ಜಾನುವಾರುಗಳ ಸಕಾಲಿಕ ಕೃತಕ ಗರ್ಭಧಾರಣೆಗಾಗಿ ವ್ಯವಸ್ಥೆಗೊಳಿಸುವುದು. ಮಹಿಳಾ ರೈತರಿಗೆ ಜಾನುವಾರು ವಿಮೆ ಕುರಿತು ಬೆಂಬಲ ಮತ್ತು ಮಾರ್ಗದರ್ಶನವನ್ನು ನೀಡುವುದು. 


ಪಶುಸಂಗೋಪನಾ ಇಲಾಖೆಯ ಸಾಮಾನ್ಯ ಮಾಹಿತಿ ಮತ್ತು ತಾಂತ್ರಿಕ ಮಾಹಿತಿಗಾಗಿ ಪಶುಸಂಗೋಪನೆ ಸಹಾಯವಾಣಿ ಸಂಖ್ಯೆ 8277100200 ಲಭ್ಯತೆಯ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು. ಜಿಲ್ಲಾ ಮತ್ತು ತಾಲೂಕು ಮಟ್ಟದ ಸಿಬ್ಬಂದಿಯ ಸೂಚನೆಗಳನ್ನು ಅನುಸರಿಸುವುದು.


ಇದೇ ರೀತಿ ಹೈನುಗಾರಿಕೆ ಸಖಿ, ವನ ಸಖಿ, ಬಿ.ಸಿ ಸಖಿ (ಬ್ಯಾಂಕಿ೦ಗ್ ಕರೆಸ್ಪಾಂಡೆನ್ಸ್), ಡಿಜಿ ಪೇ ಸಖಿಯರು ಕೂಡ ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಕೃಷಿ ಸಖಿಯರಿಗೆ ಕೃಷಿ ವಿವಿಗಳ ಮೂಲಕ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತದೆ. ಪಶು ಸಖಿಗಳಿಗೆ ಇಲಾಖೆ 9 ತರಬೇತಿ ಕೇಂದ್ರಗಳು ಸೇರಿದಂತೆ ವಿಶ್ವವಿದ್ಯಾಲಯಗಳ ಮೂಲಕವೂ ತರಬೇತಿ ನೀಡಲಾಗುತ್ತದೆ. ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಮೂಲಕ ಬಿ.ಸಿ ಸಖಿ ಮತ್ತು ಡಿಜಿ ಪೇ ಸಖಿಯರಿಗೆ ಹಾಗೂ ಅರಣ್ಯ ಇಲಾಖೆಯ ಮೂಲಕ ವನ ಸಖಿಯರಿಗೆ ತರಬೇತಿ ನೀಡಲಾಗುತ್ತದೆ.

Most Popular

Related Posts