ಅಧಿಕ ಇಳುವರಿಗೆ ತಪ್ಪದೇ ಮಣ್ಣಿನ ಆರೋಗ್ಯ ತಪಾಸಣೆ ಮಾಡಿಸಿ Soil Health Check

AGRICULTURE
25 June 2024

ಅಧಿಕ ಇಳುವರಿಗೆ ತಪ್ಪದೇ ಮಣ್ಣಿನ ಆರೋಗ್ಯ ತಪಾಸಣೆ ಮಾಡಿಸಿ Soil Health Check
WhatsApp Group Join Now
Telegram Group Join Now

Soil Health Check : ಕೃಷಿ ಭೂಮಿಯಲ್ಲಿನ ಮಣ್ಣಿನ ಆರೋಗ್ಯ ತಪಾಸಣೆ ಮಾಡಿಸಿ, ಅಗತ್ಯ ಪೋಷಕಾಂಶಗಳನ್ನು ಒದಗಿಸುವುದು ಮತ್ತು ಮಣ್ಣಿನ ಫಲವತ್ತತೆಯನ್ನು ಉತ್ತಮಗೊಳಿಸುವುದು ಎಲ್ಲ ರೈತರ ಆದ್ಯ ಕರ್ತವ್ಯವಾಗಿದೆ...


ಇಂದಿನ ದಿನಮಾನಗಳಲ್ಲಿ ಆಧುನಿಕತೆಯ ಹೆಸರಿನಲ್ಲಿ, ಹೆಚ್ಚು ಹೆಚ್ಚು ಇಳುವರಿಗಾಗಿ ಮಣ್ಣಿಗೆ ಯಥೇಚ್ಚವಾಗಿ ರಾಸಾಯನಿಕಗಳನ್ನು ಸೇರಿಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಹಾಳು ಮಾಡಿ, ಭೂಮಿತಾಯಿಯನ್ನು ಬಂಜೆಯಾಗಿಸಲಾಗುತ್ತಿದೆ. ಈ ಅಚಾತುರ್ಯವನ್ನು ತಪ್ಪಿಸಲು ಕೃಷಿ ಭೂಮಿಯಲ್ಲಿನ ಮಣ್ಣನ್ನು ಆರೋಗ್ಯ ತಪಾಸಣೆ ಮಾಡಿಸಿ, ಶಿಫಾರಸ್ಸಿತ ಪ್ರಮಾಣದಲ್ಲಿ ಅಗತ್ಯ ಪೋಷಕಾಂಶಗಳನ್ನು ಒದಗಿಸುವುದು ಮತ್ತು ಮಣ್ಣಿನ ಫಲವತ್ತತೆಯನ್ನು ಉತ್ತಮಗೊಳಿಸುವುದು ಎಲ್ಲ ರೈತರ ಆದ್ಯ ಕರ್ತವ್ಯವಾಗಿದೆ. ಮಣ್ಣಿನ ಭೌತಿಕ, ರಾಸಾಯನಿಕ, ಜೈವಿಕ ಗುಣಧರ್ಮಗಳು ಮತ್ತು ಮಣ್ಣಿನಲ್ಲಿರುವ ಬೆಳೆಗಳಿಗೆ ಲಭ್ಯವಿರುವ ಪೋಷಕಾಂಶಗಳ ಪ್ರಮಾಣವನ್ನು ಪರೀಕ್ಷಿಸುವ ವಿಧಾನಕ್ಕೆ ಮಣ್ಣು ಪರೀಕ್ಷೆ ಎನ್ನುತ್ತಾರೆ.


ಮಣ್ಣು ಪರೀಕ್ಷೆಯ ಉದ್ದೇಶ


ಮಣ್ಣಿನಲ್ಲಿರುವ ವಿವಿಧ ಪೋಷಕಾಂಶಗಳು, ಅವುಗಳ ಲಭ್ಯತೆ, ಫಲವತ್ತತೆಯ ಆಧಾರದ ಮೇಲೆ ಸೂಕ್ತ ಬೆಳೆಗಳನ್ನು, ಅವುಗಳಿಗೆ ಹಾಕುವ ಗೊಬ್ಬರಗಳ ಪ್ರಮಾಣವನ್ನು ನಿರ್ಧರಿಸಬಹುದು.


ಮಣ್ಣು ಪರೀಕ್ಷೆಯಿಂದ ಮಣ್ಣಿನಲ್ಲಿರುವ ಸಮಸ್ಯೆಯನ್ನು ಗುರುತಿಸಬಹುದು. ಕ್ಷಾರತೆ, ಆಮ್ಲತೆ ಮತ್ತು ಸವಳು ಪ್ರಮಾಣವನ್ನು ಕಂಡುಹಿಡಿದು, ಬೆಳೆೆಗಳ ಮೇಲೆ ಇವುಗಳ ಪರಿಣಾಮ ಏನು ಎಂಬುದನ್ನು ತಿಳಿಯಬಹುದು.


ಆಮ್ಲೀಯ ಮಣ್ಣಿಗೆ ಸುಣ್ಣ ಹಾಕುವಿಕೆ ಹಾಗೂ ಕ್ಷಾರ ಮಣ್ಣಿಗೆ ಜಿಪ್ಸಂ ಹಾಕುವಿಕೆಯ ಪ್ರಮಾಣವನ್ನು ಕಂಡು ಹಿಡಿಯಬಹುದು. ಲಭ್ಯವಿರುವ ಪೋಷಕಾಂಶಗಳ ಪ್ರಮಾಣದ ಆಧಾರದ ಮೇಲೆ, ಮಣ್ಣನ್ನು ಅತೀ ಮಧ್ಯಮ ಹಾಗೂ ಕಡಿಮೆ ಫಲವತ್ತಾದ ಮಣ್ಣೆಂದು ವರ್ಗೀಕರಿಸಬಹುದು.


ಮಣ್ಣು ಪರೀಕ್ಷೆಯು ಮಣ್ಣಿನ ಉತ್ಪಾದಕತೆಯನ್ನು ತಿಳಿಸುತ್ತದೆ. ಇದರಿಂದ ಉತ್ತಮ ಇಳುವರಿ ಪಡೆಯಬಹುದೇ ಅಥವಾ ಇಲ್ಲವೇ ಎಂಬುದನ್ನು ಮೊದಲೇ ನಿರ್ಧರಿಸಬಹುದು.


ಮಣ್ಣಿನ ಮಾದರಿ ತೆಗೆಯುವ ವಿಧಾನ


ಮಣ್ಣನ್ನು ಸಂಗ್ರಹಿಸುವ ಮೊದಲು, ರೈತರು ಜಮೀನಿನ ಸುತ್ತ ಸುತ್ತಾಡಿ, ಭೂಮಿಯ ಇಳಿಜಾರು, ಬಣ್ಣ, ಮಣ್ಣಿನ ಕಣ ವಿನ್ಯಾಸ, ಬೆಳೆಪದ್ಧತಿ ಇತ್ಯಾದಿಗಳನ್ನು  ಪರಿಶೀಲಿಸಿ, ಜಮೀನನ್ನು ಏಕ ರೀತಿಯ ವಿಭಾಗಗಳನ್ನಾಗಿ ವಿಂಗಡಿಸಬೇಕು. ಬಳಿಕ ಒಂದು ಎಕರೆಗೆ ಸುಮಾರು 8-10 ಜಾಗಗಳಲ್ಲಿ ಉಪ ಮಾದರಿ ಮಣ್ಣು ತೆಗೆಯುವ ಸ್ಥಳಗಳನ್ನು ಗುರುತಿಸಬೇಕು.


ಅನಂತರ ಆ ಜಾಗದಲ್ಲಿ `V‘ ಆಕಾರದಲ್ಲಿ 15.ಸೆ.ಮೀ ಆಳದ ತನಕ ಗುಂಡಿ ತೆಗೆಯಬೇಕು. ಆಹಾರ ಧಾನ್ಯ ಬೆಳೆಯುವ ಪ್ರದೇಶದಲ್ಲಿ 15 ಸೆ.ಮೀ ಆಳದವರೆಗೆ, ಹೆಚ್ಚು ಆಳಕ್ಕೆ ಇಳಿಯುವ ಬೇರುಗಳನ್ನು ಹೊಂದಿರುವ ಬೆಳೆಗಳಲ್ಲಿ ಅಥವಾ ತೋಟಗಾರಿಕಾ ಬೆಳೆಗಳಲ್ಲಿ 15 ಸೆ.ಮೀ ಹಾಗೂ 30 ಸೆ.ಮೀ ವರೆಗೆ ಮಾದರಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು.


‘V‘ ಆಕಾರದ ಗುಂಡಿಯಲ್ಲಿರುವ ಮಣ್ಣನ್ನು ಹೊರಹಾಕಿ, ಸೂರ್ಯನ ದಿಕ್ಕಿಗೆ ವಿರುದ್ದವಾಗಿ, ಗುಂಡಿಯ ಒಂದು ಬದಿಯಲ್ಲಿ ಎರಡು ಅಂಗುಲ ದಪ್ಪದ ಮಣ್ಣಿನ ಪದರವನ್ನು, ಮೇಲಿನಿಂದ ಗುಂಡಿಯ ತಳಭಾಗದವರೆಗೂ ಕತ್ತರಿಸಿ ತೆಗೆಯಬೇಕು. ಕ್ಷಾರಯುಕ್ತ ಜೌಳು ಮಣ್ಣಿನಲ್ಲಿ ಕಾಣಿಸುವ ಲವಣದ ಪದರವನ್ನು ತೆಗೆದು ಪ್ರತ್ಯೇಕವಾಗಿ ಸಂಗ್ರಹಿಸಬೇಕು. ತೆಗೆದ ಮಣ್ಣು ಹಸಿಯಾಗಿದ್ದಲ್ಲಿ ನೆರಳಿನಲ್ಲಿ ಆರಿಸಿ ನಂತರ ಮಿಶ್ರಣ ಮಾಡಬೇಕು.


ಹೀಗೆ ಒಂದೇ ತಾಕಿನಿಂದ ಸಂಗ್ರಹಿಸಿದ ಮಣ್ಣನ್ನು ಸ್ವಚ್ಚವಾದ ಪ್ಲಾಸ್ಟಿಕ್ ಹಾಳೆಯ ಮೇಲೆ ಸುರಿಯಬೇಕು. ಹೆಂಟೆಗಳನ್ನು ಪುಡಿ ಮಾಡಿ, ಕಲ್ಲು ಗಾಜಿನ ಚೂರು, ಹುಲ್ಲು ಮಂತಾದ ವಸ್ತುಗಳನ್ನು ಆರಿಸಿ ತೆಗೆದು, ಚನ್ನಾಗಿ ಮಿಶ್ರಣ ಮಾಡಿ ಗೋಲಾಕಾರದಲ್ಲಿ ಹರಡಬೇಕು. ಬಳಿಕ ಮಣ್ಣನ್ನು ನಾಲ್ಕು ಭಾಗವನ್ನಾಗಿಸಿ, ವಿರುದ್ದ ದಿಕ್ಕಿನ ಮಣ್ಣನ್ನು ತೆಗೆದು ಉಳಿದ ಮಣ್ಣನ್ನು ಮಿಶ್ರಣ ಮಾಡಿ, ಪುನಃ ಮೊದಲಿನಂತೆÀ ನಾಲ್ಕು ಭಾಗವನ್ನಾಗಿಸಿ, ವಿರುದ್ದ ಭಾಗದ ಮಣ್ಣನ್ನು ತೆಗೆದುಕೊಳ್ಳಬೇಕು. ಈ ವಿಧಾನವನ್ನು ಸುಮಾರು ಅರ್ಧ ಕಿ.ಗ್ರಾಂ ಮಣ್ಣು ಮಾದರಿ ಸಿಗುವವರೆಗೂ ಪುನರಾವರ್ತಿಸಬೇಕು.


ಆರೋಗ್ಯಯುತ ಮಣ್ಣಿನ ಗುಣಲಕ್ಷಣಗಳು


ಆರೋಗ್ಯಯುತವಾದ ಮಣ್ಣಿನ ರಸಸಾರ: 6.5 - 7.5, ಲವಣಾಂಶ: 4 ಮೀ ಗಿಂತ ಕಡಿಮೆ, ಇಂಗಾಲಾAಶ: 0.5 ಗಿಂತ ಹೆಚ್ಚು, ಕ್ಷಾರ ಪ್ರಮಾಣ: ವಿನಿಮಯ ಸೋಡಿಯಂ ಶೇ 15ಕ್ಕಿಂತ ಕಡಿಮೆ ಇರಬೇಕು. ಇನ್ನು ಪೋಷಕಾಂಶಗಳ ಕನಿಷ್ಠ ಪ್ರಮಾಣವು ಪ್ರತಿ ಹೆಕ್ಟೇರ್‌ಗೆ ಸಾರಜನಕ: 280 ಕೆ.ಜಿ, ರಂಜಕ: 22 ಕೆ.ಜಿ, ಪೊಟಾಷ್: 130 ಕೆ.ಜಿ, ಗಂಧಕ: 20 ಕೆ.ಜಿ ಹೊಂದಿರಬೇಕು.


ಲಘು ಪೋಷಕಾಂಶಗಳಾದ ಸತು: 0.8 ಮಿ.ಗ್ರಾಂ/ಕಿ.ಗ್ರಾಂ, ಕಬ್ಬಿಣ: 2.5 ಮಿ.ಗ್ರಾಂ/ಕಿ.ಗ್ರಾಂ, ಬೋರಾನ್: 0.1 ಮಿ.ಗ್ರಾಂ/ಕಿ.ಗ್ರಾಂ, ತಾಮ್ರ: 0.2 ಮಿ.ಗ್ರಾಂ/ಕಿ.ಗ್ರಾಂ, ಮ್ಯಾಂಗನೀಸ್: 2.0 ಮಿ.ಗ್ರಾಂ/ಕಿ.ಗ್ರಾಂ, ಮಾಲಿಬ್ಡಿನಂ: 0.7ಮಿ.ಗ್ರಾಂ/ಕಿ.ಗ್ರಾಂ ಪ್ರಮಾಣವನ್ನು ಹೊಂದಿರುವ ಮಣ್ಣನನ್ನು ಆರೋಗ್ಯಯುತ ಮಣ್ಣು ಎಂದು ಗುರುತಿಸಬಹುದು.


ಗಮನಿಸಬೇಕಾದ ಅಂಶಗಳು


ಜಮೀನುಗಳಿಗೆ ಯಾವುದೇ ರೀತಿಯ ಗೊಬ್ಬರ ಹಾಕುವ ಮೊದಲೇ ಮಣ್ಣಿನ ಮಾದರಿಗಳನ್ನು ತೆಗೆಯಬೇಕು. ಒಣ ಪ್ರದೇಶದಲ್ಲಿ ಮಣ್ಣಿನ ಮಾದರಿಗಳನ್ನು ಬೇಸಿಗೆಯಲ್ಲಿ (ಏಪ್ರಿಲ್/ಮೇ) ತೆಗೆÀಯುವುದು ಸೂಕ್ತ.


ಗೊಬ್ಬರಗಳನ್ನು ಜಮೀನುಗಳಿಗೆ ಹಾಕಿದ ಮೂರು ತಿಂಗಳುಗಳ ಬಳಿಕ ಮಾತ್ರ ಮಾದರಿಗಳನ್ನು ತೆಗೆಯಬಹುದು. ಮಣ್ಣಿನಲ್ಲಿ ಹೆಚ್ಚು ಆರ್ದತೆ ಇದ್ದಾಗ ಮಣ್ಣಿನ ಮಾದರಿ ತೆಗೆಯಬಾರದು. (ಭತ್ತದ ಗದ್ದೆಯನ್ನು ಹೊರತುಪಡಿಸಿ.)


ನಿಂತ ಬೆಳೆಗಳಲ್ಲಿ ಮಾದರಿಗಳನ್ನು ತೆಗೆಯುವುದಾದರೇ, ಬೆಳೆಯ ಸಾಲುಗಳಲ್ಲಿ ತೆಗೆಯಬಾರದು. ಆದರೆ ಸಾಲುಗಳ ಮಧ್ಯದಲ್ಲಿ ತೆಗೆಯಬಹುದು.ತೋಟದ ಬೆಳೆಗಳಲ್ಲಿ ಕಾಂಡದಿAದ ಸುಮಾರು 1.5 ಮೀಟರ್ ದೂರದಲ್ಲಿ ಮಾದರಿ ತೆಗೆಯಬೇಕು.


ಕೊಟ್ಟಿಗೆ ಗೊಬ್ಬರ ಸಂಗ್ರಹಿಸಿದ ಸ್ಥಳ, ಬದುಗಳ ಹತ್ತಿರ, ರಸ್ತೆಯ ಸಮೀಪ, ವಿದ್ಯುತ್ ಕಂಬಗಳ ಹತ್ತಿರ, ದೊಡ್ಡ ಗಿಡಗಳ ಕೆಳಗೆ ಹಾಗೂ ರಾಸಾಯನಿಕ ಗೊಬ್ಬರಗಳು ಬಿದ್ದ ಸ್ಥಳಗಳಲ್ಲಿ ಮಾದರಿಗಳನ್ನು ತೆಗೆಯಬಾರದು.


ಮಾದರಿಗಳನ್ನು ತೆಗೆಯುವ ಮೊದಲು ಗುದ್ದಲಿ, ಸಲಾಕೆ, ಬುಟ್ಟಿಗಳನ್ನು ನೀರಿನಲ್ಲಿ ತೊಳೆದು, ಒಣಗಿಸಿ ನಂತರ ಉಪಯೋಗಿಸಬೇಕು. ತುಕ್ಕು ಹಿಡಿದ ಸಲಕರಣೆಗಳನ್ನು ಬಳಸಬಾರದು.


ಸಾಮಾನ್ಯವಾಗಿ ಒಣಬೇಸಾಯ ಪ್ರದೇಶಗಳಲ್ಲಿ ಮೂರು ವರ್ಷಗಳಿಗೊಮ್ಮೆ ಮಣ್ಣು ಪರೀಕ್ಷೆ ಮಾಡಿಸಬೇಕು. ಆದರೆ ನೀರಾವರಿ ಪ್ರದೇಶಗಳಲ್ಲಿ ಬಹುಬೆಳೆ  ಹಾಗೂ ತಳಿವರ್ಧಕ ಬೆಳೆಗಳನ್ನು ಬೆಳೆಯುವುದರಿಂದ ಪ್ರತೀ ವರ್ಷ ಅಥವಾ ಮೂರನೇ ಬೆಳೆ ಕಟಾವಿನ ನಂತರ ಮಣ್ಣು ಪರೀಕ್ಷೆ ಮಾಡಿಸುವುದು ಅವಶ್ಯಕ.

Most Popular

Related Posts