ಕೊನೆಗೂ ಅತ್ತೆ ಬತ್ತಿ ಇಟ್ಟಳು…!! ಅನ್ಕೊಂಡ ಸೊಸೆಗೆ ಜ್ಞಾನೋದಯವಾದ ಕತೆ

ಅದೇನೋ ಪಾ… ಈ ಅತ್ತೆ ಸೊಸೆ ಮ್ಯಾಟರ್ ಬಂದ್ರೆ ಸಾಕು ನಮ್ ಜನರಲ್ಲಿ ಒಳ್ಳೆಯ ವಿಷಯವೇ ತಲೆಯಲ್ಲಿ ಬರೋದಿಲ್ಲ… “ಎರಡು ಜಡೆ ಕೂಡಿದ್ರೆ ಹಾಳು” ಎಂಬ ಅಭಿಪ್ರಾಯ ನಮ್ಮೆಲ್ಲರ ಮನಸಲ್ಲಿ ಠಿಕಾಣಿ ಹಾಕಿ ಕೂತು ಬಿಟ್ಟಿದೆ. ಅದ್ರಲ್ಲೂ ಈ ಹಾಳಾದ್ ಸೀರಿಯಲ್‌ಗಳು ಬರೀ ನೆಗೆಟಿವ್ ಅಂಶಗಳನ್ನು ತುರ್ಕಿ ನಮ್ ಮೈಂಡ್‌ನಲ್ಲಿ ಒಂತರ ಕೆಟ್ಟ ಅಭಿಪ್ರಾಯ ಬರೊ ಹಾಗಿ ಮಾಡಿಬಿಟ್ಟಿವೆ ಎನ್ನುವುದು ಸತ್ಯ ಸಂಗತಿ…

ಆದ್ರೆ ಎಲ್ಲಾ ಅತ್ತೆ ಸೊಸೆಯರು ಕೂಡ ಹೀಗೆ ಇರೋದಿಲ್ಲ ಎಂಬುದು ಕೂಡ ಸತ್ಯವೇ !! ಅದೇ ರೀತಿ ಇಲ್ಲೊಂದು ಕತೆ ನಿಮ್ಗೆ ಖಂಡಿತ ಅತ್ತೆ ಸೊಸೆಯರ ಬಾಂಧವ್ಯವನ್ನು ಎತ್ತಿ ತೋರಿಸುತ್ತದೆ. ಹಾಗಾದ್ರೆ ಈ ಕತೆ ಏನು ? ಹೇಗೆ ಅತ್ತೆ ತನ್ನ ಸೊಸೆಯನ್ನು ಪ್ರೀತಿಸುತ್ತಾಳೆ ಎಂಬುದನ್ನು ಸವಿವರವಾಗಿ ಹೇಳಿದೆ… ನೀವೇ ಓದಿ.

ಒಂದು ಮನೆಯಲ್ಲಿ ಅತ್ತೆ ಮತ್ತು ಸೊಸೆ ತುಂಬ ಪ್ರೀತಿಯಿಂದ ಜೀವನ ನಡೆಸುತ್ತಿದ್ದರು. ಸೊಸೆಯು ಅತ್ತೆಗೆ ತುಂಬಾ ಪ್ರೀತಿ ಮಾಡುತ್ತಿದ್ದಳು ಅತ್ತೆಗೆ ಯಾವುದೇ ಕೊರತೆಯನ್ನು ಮಾಡುವುದಿಲ್ಲವಾಗಿದ್ದಳು ತುಂಬಾ ಅನೋನ್ಯತೆಯಿಂದ ಇರುತಿದ್ದಳು. ಒಂದು ದಿನ ಅವರ ಮನೆಯಲ್ಲಿ ನೆಂಟರು ಬಂದರು. ಆ ಸಮಯದಲ್ಲಿ ಅತ್ತೆ ನೆಂಟರ ಜೊತೆ ಮಾತನಾಡುತ್ತಾ, ಮಾತಿನ ಮದ್ಯೆ “ಮಗಳು ಸಕ್ಕರೆ ಇದ್ದಂತೆ ಮತ್ತು ಸೊಸೆ ಉಪ್ಪು ಇದ್ದಂತೆ” ಎಂದು ಬಿಟ್ಟರು. ಈ ಮಾತು ಕೊನೆಗೂ ಸೊಸೆಯ ಕಿವಿಗೆ ಬಿದ್ದು ಬಿಟ್ಟಿತು.

ಅತ್ತೆಯ ಈ ಮಾತುಗಳನ್ನು ಕೇಳಿ ಸೊಸೆಯು ತುಂಬಾ ದುಃಖಿಯಾದಳು, ಮತ್ತು ಸೊಸೆಯ ನಡುವಳಿಕೆಯಲ್ಲೂ ತುಂಬಾ ಬದಲಾವಣೆಗಳು ಕಾಣತೊಡಗಿದವು. ಇದನ್ನು ಗಮನಿಸಿದ ಅತ್ತೆ, ಸೊಸೆಯನ್ನು ಸ್ವಲ್ಪ ದಿನದ ನಂತರ ಪ್ರೀತಿಯಿಂದ ಕರೆದು ಜೊತೆಯಲ್ಲಿ ಕುಳಿತು, “ನೀನು ಇತ್ತೀಚಿಗೆ ತುಂಬಾ ಮೌನವಾಗಿ ಇರಲು ಕಾರಣವೇನು ?” ಎಂದು ಕೇಳಿದರು.

ಆಗ ಸೊಸೆಯು ಅಳುತ್ತಾ… ಅಳುತ್ತಾ… “ನೀವು ನಮ್ಮ ನೆಂಟರೊಟ್ಟಿಗೆ ಮಾತನಾಡುವಾಗ, ನಾನು ನಿಮ್ಮ ಮಾತುಗಳನ್ನು ಕೇಳಿದೆ. ನಿಮ್ಮ ಆ ಮಾತು ನನಗೆ ಕೊಂಚ ಮಟ್ಟಿಗೆ ಬೇಸರ ತರಿಸಿದೆ” ಎಂದಳು. ಅತ್ತೆ ನಗುತ್ತಾ, “ಮಗಳೇ ನೀನು ನನ್ನ ಮಾತಿನ ತಿರುಳನ್ನು ಅರಿತಿಲ್ಲ ಕಣೆ, ನೀನು ತಪ್ಪು ಅರ್ಥ ಮಾಡಿಕೊಂಡಿರುವೆ, ಆ ಮಾತಿನ ಅರ್ಥ ಏನೆಂದರೆ : ಮಗಳು ಎಲ್ಲಾ ಸಮಯದಲ್ಲೂ ಸಕ್ಕರೆಯಂತೆ ಸಿಹಿ ಸಿಹಿಯಾಗಿ ಇರುತ್ತಾಳೆ. ಸೊಸೆ ಉಪ್ಪಿನಂತೆ ಇರುತ್ತಾಳೆ ಅವಳ ಋಣವನ್ನು ತೀರಿಸಲು ಆಗುವುದಿಲ್ಲ ಮತ್ತು ಉಪ್ಪು ಇಲ್ಲವೆಂದರೆ ಯಾವ ತಿನಿಸು ಸಹ ರುಚಿಕರ ಆಗಿರುವುದಿಲ್ಲ. ಮನೆಯ ಗೌರವ ಒಂದು ಸೊಸೆಯಿಂದಲೇ ಬರುತ್ತದೆ”.

ಈ ಮಾತಿನಿಂದ ಹೆಚ್ಚು ಸಂತೋಷಗೊಂಡ ಸೊಸೆ, ಅತ್ತಿಗೆ ಕ್ಷಮೆ ಕೇಳಿದಳು. ಹೌದು ಒಂದು ಹೆಣ್ಣು ತನ್ನ ಗಂಡನ ಮನೆಗೆ ಕಾಲಿಟ್ಟಾಗ ಆ ಮನೆಯವರ ಜೀವನ ಸ್ವರ್ಗ ಮಾಡುವ ಅಥವಾ ನರಕವನ್ನಾಗಿ ಮಾಡುವ ಒಂದು ಶಕ್ತಿ ಹೆಣ್ಣು ಹೊಂದಿದ್ದಾಳೆ.

SHARE